ಸಿಂಧೂ ನಾಗರಿಕತೆಯ ಪ್ರಮುಖ ವ್ಯಾಪಾರ ಕೇಂದ್ರ. ಇದು ಗುಜಾರಾತಿನ ಅಹಮದಾಬಾದ್ ಬಳಿಯಲ್ಲಿದೆ ಹಾಗೂ ಅಲ್ಲಿಂದ ನೈಋತ್ಯಕ್ಕೆ 80 ಕಿಮೀ ದೂರದಲ್ಲಿ ಬೊಗಾವೊ ನದಿ ದಂಡೆಯಲ್ಲಿದೆ. ಇದನ್ನು ಸಂಶೋಧಿಸಿದವರು ಎಸ್.ಆರ್. ರಾವ್ (1956). ಲೋಥಾಲ್ ಕ್ರಿ.ಪೂ. 2500 ರಿಂದಲೇ ಪ್ರಮುಖ ಬಂದರು ನಗರವಾಗಿತ್ತೆಂದು ಸಂಶೋಧನೆಗಳಿಂದ ತಿಳಿದು ಬರುತ್ತದೆ. ಈ ಬಂದರಿನ ಮೂಲಕ ಸಿಂಧೂ ಜನರು ಈಜಿಪ್ಟ್, ಮೆಸಪೊಟೇಮಿಯ, ಬಹ್ರೇನ್-ದ್ವೀಪಗಳು, ಯೂಫ್ರೆಟೀಸ್-ಟೈಗ್ರಿಸ್ ನದಿ ಕಣಿವೆ, ನೈಲ್ ನದಿ ಕಣಿವೆ, ಪೂರ್ವ ಆಫ್ರಿಕದ ಕರಾವಳಿ ಪ್ರದೇಶ ಹಾಗೂ ಸುಮೇರಿಯಗಳ ಜೊತೆ ವ್ಯಾಪಾರ ಸಂಪರ್ಕಗಳನ್ನು ಇಟ್ಟುಕೊಂಡಿದ್ದರು. ಇಲ್ಲಿ ಒಂದು ಸಣ್ಣ ಬಂದರು ಮತ್ತು ನೌಕಾ ನಿರ್ಮಾಣ ಕೇಂದ್ರವಿದೆ. 

	ಸಿಂಧೂ ನಾಗರಿಕತೆಯ ಮೂರು ಪ್ರಸಿದ್ಧ ಕೇಂದ್ರಗಳಲ್ಲಿ ಇದೂ ಒಂದು (ಹರಪ್ಪ, ಮೊಹೆಂಜೊದಾರೊ). ಇದು ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆಯಿಂದ ಅಕ್ಕ ಪಕ್ಕದ ಪ್ರದೇಶಗಳಲ್ಲಿನ ಕೃಷಿ ಉತ್ಪನ್ನ ಗಳನ್ನು, ಇಲ್ಲಿನ ಲೋಹದ ಉಪಕರಣ ಹಾಗೂ ಕಲ್ಲಿನ ಸಲಕರಣೆಗಳಿಗೆ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ಈ ನಗರದ ಕೈಗಾರಿಕೆಗಳ ಉತ್ಪಾದನೆಗೆ ದೇಶೀ ಹಾಗೂ ವಿದೇಶಿ ಕಚ್ಚಾ ವಸ್ತುಗಳನ್ನು ಬಳಸಿ ಕೊಳ್ಳಲಾಗುತ್ತಿತ್ತು. ಇಲ್ಲಿ ದೊರೆತಿರುವ ಉಗ್ರಾಣ ಮುದ್ರೆಗಳು, ಏಕರೀತಿಯ ತೂಕ ಮತ್ತು ಅಳತೆ ಇದ್ದುದರಿಂದ ಸಿಂಧೂ ನಾಗರಿಕತೆಯ ವ್ಯಾಪ್ತಿಯೊಳಗೆ ವ್ಯವಸ್ಥಿತವಾಗಿ ಆಂತರಿಕ ವ್ಯಾಪಾರ ನಡೆಯುತ್ತಿತ್ತೆಂದು ತಿಳಿದುಬರುತ್ತದೆ. ಇಲ್ಲಿಯ ವ್ಯಾಪಾರ ಮುದ್ರೆಗಳು ಪಶ್ಚಿಮ ಏಷ್ಯ ಹಾಗೂ ಮಧ್ಯ ಏಷ್ಯ ರಾಷ್ಟ್ರಗಳ ಜೊತೆಯಲ್ಲಿಯೂ ವ್ಯಾಪಾರ ನಡೆಸುತ್ತಿತ್ತು. ಇಲ್ಲಿಯ ದಾಸ್ತಾನು ಮಳಿಗೆಯಲ್ಲಿ ಜೇಡಿಮಣ್ಣಿನ ಮುದ್ರೆ ಗುರುತುಗಳ ಮೇಲೆ 2-3 ಬೇರೆ ಬೇರೆ ಮುದ್ರೆಗಳ ಗುರುತುಗಳಿವೆ. ಇದರ ಆಧಾರದಿಂದ ವರ್ತಕರಲ್ಲಿ ಲಾಭ ಹಂಚಿಕೆಯ ಪಾಲುದಾರಿಕೆಯಿದ್ದು ವ್ಯಾಪಾರದ ಪಾಲುದಾರರು ಮತ್ತು ದಾಸ್ತಾನು ಮಳಿಗೆಗಳ ಅಧಿಕಾರಿಗಳು ಪ್ರಮಾಣ ಮತ್ತು ಗುರುತನ್ನು ಸ್ಥಾಪಿಸುವ ಉದ್ದೇಶದಿಂದ ಈ ರೀತಿ ಬೇರೆ ಬೇರೆ ಮುದ್ರೆಗಳ ಗುರುತು ಹಾಕಲಾಗಿದೆಯೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ನುರಿತ ಕುಶಲಕರ್ಮಿಗಳ ಗುಂಪುಗಳಿದ್ದು, ವಿವಿಧ ಲೋಹಗಳ ಕೈಗಾರಿಕೆಯೂ ಪ್ರಗತಿ ಹೊಂದಿತ್ತು. ಇಲ್ಲಿಂದ ದೇಶ ವಿದೇಶಗಳಿಗೆ ಸಮುದ್ರ ಚಿಪ್ಪುಗಳನ್ನು ರಫ್ತು ಮಾಡುವ, ಸಿಂಧೂಕಣಿವೆಯಿಂದ ಚರ್ಟ್ ಕಲ್ಲನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದು ಹರಪ್ಪ-ಮಹೆಂಜೊದಾರೊ ನಗರಗಳಷ್ಟೆ ಪ್ರಗತಿ ಹೊಂದಿದ್ದ ನಗರವಾಗಿತ್ತು.

	(ಡಿಐವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ